ಹಮಾಸ್ ಉಗ್ರರ ದಾಳಿಯಿಂದ ಇಸ್ರೇಲ್‌ನ ಕಟ್ಟಡವೊಂದರ ಬಳಿ ಕಂಡ ಭಾರೀ ಪ್ರಮಾಣದ ಹೊಗೆ
- Israel Palestine Conflict ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಸಂಘರ್ಷದ ವಾತಾವರಣ ಇನ್ನೂ ಬಿರುಸುಗೊಂಡಿದೆ. ಭಾನುವಾರ ರಾತ್ರಿಯೂ ದಾಳಿ ಪ್ರತಿದಾಳಿಗಳು ನಡೆದಿರುವ ವರದಿಯಾಗಿದೆ.
ಮೂರು ದಿನಗಳಿಂದ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವೆ ನಡೆದಿರುವ ಸಂಘರ್ಷ ಸೋಮವಾರವೂ ಮುಂದುವರಿದಿದೆ. ಅಮಾಯಕರು ಗುಂಡಿನ ದಾಳಿಗೆ ಬಲಿಯಾಗುತ್ತಿದ್ದಾರೆ. ಎರಡೂ ದೇಶಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಎರಡೂ ದೇಶದ ಹಲವು ಕಡೆ ದಾಳಿ- ಪ್ರತಿದಾಳಿಗಳು ನಡೆಯುತ್ತಲೇ ಇವೆ. ಈ ವರೆಗೂ ದಾಳಿಯಿಂದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದಾರೆ. ಹಲವಾರು ಮಸೀದಿ, ಕಟ್ಟಡಗಳನ್ನು ಧ್ವಂಸಗೊಳಿಸಲಾಗಿದ್ದು, ಉಭಯ ದೇಶಗಳ ದಾಳಿ ಇನ್ನಷ್ಟು ತೀವ್ರಗೊಂಡಿದೆ.
ಪ್ಯಾಲೆಸ್ತೇನ್‌ನ ಹಮಾಸ್ ಉಗ್ರರ ಗುಂಪಿನ ದಾಳಿಯಿಂದಾಗಿ ಇಸ್ರೇಲ್‌ನ 700ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಇಸ್ರೇಲ್ ನಡೆಸುತ್ತಿರುವ ಪ್ರತಿ ದಾಳಿಯಲ್ಲಿ ಪ್ಯಾಲೆಸ್ತೇನ್‌ನ ಗಾಜಾ ನಗರದಲ್ಲಿ ಸುಮಾರು 370 ಮಂದಿ ಮೃತಪಟ್ಟಿದ್ಧಾರೆ ಎಂದು ವರದಿಯಾಗಿದೆ.
ಭಾನುವಾರ ರಾತ್ರಿಯಂತೂ ಉಭಯ ಪಡೆಗಳ ದಾಳಿಗಳು ಜೋರಾಗಿಯೇ ಇದ್ದವು. ಅದರಲ್ಲೂ ಪ್ಯಾಲೆಸ್ತೇನ್‌ನ ದಾಳಿಯಿಂದ ಆಕ್ರೋಶಗೊಂಡಿರುವ ಇಸ್ರೇಲ್ ಸೇನಾ ಪಡೆ ಭಾರೀ ಪ್ರಮಾಣದ ದಾಳಿಯಲ್ಲಿ ತೊಡಗಿದೆ. ಅದರಲ್ಲೂ ಹಮಾಸ್ ಉಗ್ರರ ಅಡಗುದಾಣಗಳನ್ನೇ ಹುಡುಕಿ ದಾಳಿ ಮಾಡಲಾಗುತ್ತಿದೆ. ಹಮಾಸ್ ಉಗ್ರರು ಹಲವು ಕಡೆಯಲ್ಲಿ ಇಸ್ರೇಲಿ ಪ್ರಜೆಗಳನ್ನು ಬಂಧಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
ಹಮಾಸ್ ಉಗ್ರರು ಇನ್ನೂ ರಾಕೆಟ್‌ಗಳನ್ನು ಹಾರಿಸುತ್ತಿದ್ದಾರೆ. ಮನೆಗಳಿಗೆ ನುಗ್ಗಿ ಜನರನ್ನು ಗಾಯಗೊಳಿಸಿ ಕೆಲವರನ್ನು ಕೊಂದು ಹಾಕಿದ್ದಾರೆ. ಎರಡು ಸಾವಿರಕ್ಕೂ ಅಧಿಕ ಮಂದಿ ಗನ್ ಶಾಟ್‌ನಿಂದ ಗಾಯಗೊಂಡಿದ್ದಾರೆ. ಹಮಾಸ್ ಉಗ್ರರನ್ನು ಹಿಮ್ಮೆಟ್ಟಿಸುವ ಕೆಲಸವೂ ನಡೆದಿದೆ ಎಂದು ಇಸ್ರೇಲ್ ಸೇನಾಪಡೆ ತಿಳಿಸಿದೆ.
ಈ ನಡುವೆ ಇರಾನ್ ದೇಶವು ಹಮಾಸ್ ಉಗ್ರರ ದಾಳಿಗೆ ಆರ್ಥಿಕ ನೆರವು ನೀಡುತ್ತಿರುವುದಾಗಿ ಇಸ್ರೇಲ್ ಗಂಭೀರ ಆರೋಪ ಮಾಡಿದೆ. ಇರಾನ್‌ನ ಬೆಂಬಲದಿಂದಲೇ ಪ್ಯಾಲೆಸ್ತೇನ್‌ನ ಹಮಾಸ್ ಉಗ್ರರು ಈ ರೀತಿ ದಾಳಿಯಲ್ಲಿ ತೊಡಗಿದ್ದಾರೆ. ಅವರಿಗೆ ಶಸ್ತ್ರಾಸ್ತ, ಹಣದ ನೆರವನ್ನೂ ಇರಾನ್ ನೀಡುತ್ತಿದೆ ಎನ್ನುವುದು ಇಸ್ರೇಲ್ ನ ಯುಎನ್ ಪ್ರತಿನಿಧಿ ಗಿಲಾಡ್ ಎರ್ಡನ್ ತಿಳಿಸಿದ್ದಾರೆ.
ಅಮೆರಿಕಾ, ಭಾರತ ಸೇರಿದಂತೆ ಹಲವು ದೇಶಗಳು ಹಮಾಸ್ ಉಗ್ರರ ಕೃತ್ಯವನ್ನು ಖಂಡಿಸಿದ್ದು, ಇಸ್ರೇಲ್ ಪರ ನಿಂತಿವೆ. ಎಲ್ಲ ರೀತಿಯ ನೆರವು ನೀಡುವುದಾಗಿ ಹಲವು ದೇಶಗಳು ಘೋಷಿಸಿವೆ.

